ಸಂಪಂಗಿ ಪ್ರಕರಣದಾಚೆಗಿನ ಸತ್ಯಗಳು

ಜನವರಿ 29ರಂದು ಕರ್ನಾಟಕದ ಭ್ರಷ್ಟಾಚಾರದ ಇತಿಹಾಸದಲ್ಲಿ ಮೂರು ಪ್ರಮುಖ ಘಟನೆಗಳು ಸಂಭವಿಸಿದವು. ಮೊದಲನೆಯದ್ದು ಇದೇ ಮೊದಲ ಬಾರಿಗೆ ಶಾಸಕನೊಬ್ಬ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು. ಎರಡನೆಯದ್ದು ಶುದ್ಧ ಹಸ್ತದ ರಾಜಕಾರಣಿ ಎಂದೇ ಎಲ್ಲರೂ ಗುರುತಿಸುವ ಸಿದ್ದರಾಮಯ್ಯನವರು `ಎಲ್ಲರೂ ಭ್ರಷ್ಟರೇ ದುರದೃಷ್ಟವಶಾತ್‌ ಈತ ಸಿಕ್ಕಿಬಿದ್ದಿದ್ದಾನೆ' ಎಂದು ಇದಕ್ಕೆ ಪ್ರತಿಕ್ರಿಯಿಸಿದ್ದು. ಈ ಪ್ರತಿಕ್ರಿಯೆಗೆ 225 ಮಂದಿ ವಿಧಾನಸಭೆ ಸದಸ್ಯರು ಮತ್ತು 75 ಮಂದಿ ವಿಧಾನ ಪರಿಷತ್ತಿನ ಸದಸ್ಯರಲ್ಲಿ ಯಾರೊಬ್ಬರೂ ವಿರೋಧ ವ್ಯಕ್ತಪಡಿಸದೇ ಇದ್ದದ್ದು. ಮತ್ತು ಲೋಕಾಯುಕ್ತ ಕಚೇರಿಗೆ ಶಾಸಕರ ದಂಡೊಂದು ನುಗ್ಗಿ ಬಂಧಿತ ಶಾಸಕ ವೈ ಸಂಪಂಗಿಯನ್ನು ಜಾಮೀನಿನ ಮೇಲೆ ತಕ್ಷಣ ಬಿಡುಗಡೆ ಮಾಡಬೇಕೆಂದು ರಂಪಾಟ ನಡೆಸಿದ್ದು. ಈ ಮೂರು ಘಟನೆಗಳು ಭ್ರಷ್ಟಾಚಾರದ ಸ್ವರೂಪವನ್ನು ವಿವರಿಸುತ್ತಿವೆ.

***
ಲೋಕಾಯುಕ್ತರ ಬಲೆಗೆ ಬಿದ್ದವರು ಆಡಳಿತಾರೂಢ ಬಿಜೆಪಿಗೆ ಸೇರಿದ ಕೋಲಾರ ಜಿಲ್ಲೆ ಕೆಜಿಎಫ್‌ ಶಾಸಕ ವೈ ಸಂಪಂಗಿ. ಐದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ (ಐವತ್ತು ಸಾವಿರ ನಗದು, ಉಳಿದದ್ದು ಚೆಕ್‌) ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಮಾನ್ಯ ಶಾಸಕರು ಈ ಮೊತ್ತ ಏಕೆ ಪಡೆಯುತ್ತಿದ್ದರು? ಲೋಕಾಯುಕ್ತ ಪೊಲೀಸರು ನೀಡುವ ಮಾಹಿತಿ ಹೀಗಿದೆ.

ಕೆಜಿಎಫ್‌ನ ಆಂಡರ್ಸನ್‌ ಪೇಟೆಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೊಯಿನ್‌ ಫಾರೂಕ್‌ ಎಂಬವರಿಗೆ ಒಂದು ನೀವೇಶನವಿದೆ. ಇದನ್ನು ಸುಳ್ಳು ದಾಖಲೆಗಳ ಮೂಲಕ ತಮ್ಮ ವಶಕ್ಕೆ ತೆಗೆದುಕೊಳ್ಳಲು ಇಲಿಯಾಸ್‌, ನಯಾಝ್‌ ಮತ್ತು ಖಾನ್‌ ಫಯಾಝ್‌ ಪ್ರಯತ್ನಿಸಿದ್ದರು. ಇದರ ವಿರುದ್ಧ ಮೊಯಿನ್‌ ಫಾರೂಕ್‌ ಇದೇ ಠಾಣೆಯಲ್ಲಿ ದೂರು ನೀಡಲು ಹೋದಾಗ ಅದನ್ನು ಠಾಣಾಧಿಕಾರಿ ಸ್ವೀಕರಿಸಿರಲಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠರು ನಿರ್ದೇಶಿಸಿದ ನಂತರ ದೂರು ದಾಖಲಿಸಿಕೊಂಡಿದ್ದರು. ಮೊಯಿನ್‌ ಫಾರೂಕ್‌ ವಿರುದ್ಧ ಇಲಿಯಾಸ್‌ ತಮ್ಮ ಪತ್ನಿಯ ಮೂಲಕ ದೂರು ಕೊಡಿಸಿದ್ದರು. ಈ ದೂರನ್ನೂ ಪಡೆದ ಪೊಲೀಸರು ಯಾರನ್ನೂ ಬಂಧಿಸುವುದಕ್ಕೆ ಹೋಗಿರಲಿಲ್ಲ.

ತನ್ನ ನಿವೇಶನ ಅಪಹರಿಸಲು ಪ್ರಯತ್ನಿಸಿದವರ ವಿರುದ್ಧ ತಾನು ದೂರು ನೀಡಿರುವಾಗಲೇ ತನ್ನ ಮೇಲೊಂದು ಕ್ರಿಮನಲ್‌ ಪ್ರಕರಣ ದಾಖಲಾಗಿರುವುದನ್ನು ಕಂಡು ಮೊಯಿನ್‌ ಫಾರೂಕ್‌ ಸಹಜವಾಗಿಯೇ ಭಯಪಟ್ಟಿದ್ದಾರೆ. ಈ ಪ್ರಕರಣದಿಂದ ಪಾರಾಗಲು ಠಾಣೆಯ ಇನ್ಸ್‌ಪೆಕ್ಟರ್‌ ಲಕ್ಷಣ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಪಾಶಾ ಒಂದು ಸಲಹೆಯನ್ನೂ ನೀಡಿದ್ದಾರೆ. ಅದರಂತೆ ಶಾಸಕರನ್ನು ಸಂಪರ್ಕಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಫಾರೂಕ್‌ ಅವರು ಶಾಸಕ ವೈ ಸಂಪಂಗಿಯವರನ್ನು ಸಂಪರ್ಕಿಸಿ ತಮ್ಮ ಅಳಲು ತೋಡಿಕೊಂಡಾಗ ಐದು ಲಕ್ಷ ರೂಪಾಯಿ ಕೊಟ್ಟರೆ ಕೇಸು ಇತ್ಯರ್ಥಗೊಳಿಸಿ `ಬಿ' ರಿಪೋರ್ಟ್‌(ಪ್ರಕರಣ ಮುಕ್ತಾಯ)ಹಾಕಿಸುವುದಾಗಿ ಹೇಳಿದ್ದರು. ಈ ಮಾತುಕತೆಯನ್ನು ಫಾರೂಕ್‌ ಧ್ವನಿ ಮುದ್ರಿಸಿಕೊಂಡು ಲೋಕಾಯುಕ್ತವನ್ನು ಸಂಪರ್ಕಿಸಿದರು. ಲೋಕಾಯುಕ್ತ ಪೊಲೀಸರು ಶಾಸಕರನ್ನು ಲಂಚ ಪಡೆಯುವಾಗಲೇ ಹಿಡಿಯಲು ತೀರ್ಮಾನಿಸಿ ದಾಳಿಯ ರೂಪು ರೇಷೆಗಳನ್ನು ಸಿದ್ಧಪಡಿಸಿ ಕಾರ್ಯಾಚರಣೆ ನಡೆಸಿದರು.

ಫಾರೂಕ್‌ರಿಂದ 50,000 ರೂಪಾಯಿಗಳ ನಗದು ಮತ್ತು ಉಳಿದ ಹಣವನ್ನು ಚೆಕ್‌ ರೂಪದಲ್ಲಿ ಶಾಸಕರ ಭವನದಲ್ಲಿಯೇ ಪಡೆದ ಶಾಸಕ ವೈ ಸಂಪಂಗಿ ತಕ್ಷಣವೇ ಆಂಡರ್ಸನ್‌ಪೇಟೆಯ ಪೊಲೀಸ್‌ ಠಾಣೆಗೆ ದೂರವಾಣಿ ಕರೆ ಮಾಡಿ ಫಾರೂಕ್‌ ವಿರುದ್ಧ ಇರುವ ಕ್ರಿಮಿನಲ್‌ ಪ್ರಕರಣ ಇತ್ಯರ್ಥಗೊಳಿಸಲು ಸಬ್‌ ಇನ್ಸ್‌ಪೆಕ್ಟರ್‌ ಪಾಶಾಗೆ ಸೂಚಿಸಿದರು. ತಕ್ಷಣವೇ ಲೋಕಾಯುಕ್ತ ಪೊಲೀಸರು ರಂಗ ಪ್ರವೇಶ ಮಾಡಿದರು.

***

ಜೆ ಎಚ್‌ ಪಟೇಲ್‌ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರಿಗಳು ಮತ್ತು ರಾಜಕಾರಣಿಗಳ ಸಂಬಂಧದ ಬಗ್ಗೆ ಮಾತನಾಡುತ್ತಾ `ಒಬ್ಬ ಎಂಎಲ್‌ಎ ಮತ್ತು ಸಬ್‌ ಇನ್ಸ್‌ಪೆಕ್ಟರ್‌ ಒಂದಾಗಿಬಿಟ್ಟರೆ ಮತ್ತೆ ಆ ಕ್ಷೇತ್ರವನ್ನು ಉದ್ದಾರ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ' ಎಂದಿದ್ದರು. ಶಾಸಕ ವೈ ಸಂಪಂಗಿ ಪ್ರಕರಣದಲ್ಲಿ ಸಂಭವಿಸಿರುವುದು ಇದುವೇ. ಕರ್ನಾಟಕದಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆಯ ಮೂಲವಿರುವುದೂ ಇಲ್ಲಿಯೇ.

ಪೊಲೀಸ್‌ ಇನ್ಸ್‌ಪೆಕ್ಟರ್‌ ಅಥವಾ ಸಬ್‌ ಇನ್ಸ್‌ಪೆಕ್ಟರ್‌ಗಳು ತಮಗೆ ಬೇಕಿರುವ ಠಾಣೆಗೆ ವರ್ಗಾವಣೆ ಪಡೆಯಲು ಶಾಸಕರಿಗೆ ಲಂಚ ಕೊಡುತ್ತಾರೆ. ಅದೇ ಠಾಣೆಯಲ್ಲಿ ಉಳಿದುಕೊಳ್ಳುವುದಕ್ಕೆ ನಿಯಮಿತವಾಗಿ ಒಂದಷ್ಟು ಲಂಚವನ್ನು ಶಾಸಕರಿಗೆ ಕೊಡುತ್ತಲೇ ಇರಬೇಕಾಗುತ್ತದೆ. ಇಲ್ಲದಿದ್ದರೆ ಹೆಚ್ಚು ಕೊಡುವ ಮತ್ತೊಬ್ಬ ಆ ಸ್ಥಾನ ಕಬಳಿಸಬಹುದೆಂಬ ಭಯ ಪೊಲೀಸ್‌ ಅಧಿಕಾರಿಗಳಿಗಿರುತ್ತದೆ. ಅಂದರೆ ಲಂಚ ಕೊಟ್ಟು ವರ್ಗಾವಣೆ ಪಡೆದುಕೊಂಡು ಬಂದ ಪೊಲೀಸ್‌ ಅಧಿಕಾರಿ ವರ್ಗಾವಣೆಗೆ ಕೊಟ್ಟ ಲಂಚ, ಅಲ್ಲಿ ಉಳಿಯುವುದಕ್ಕೆ ಕೊಡಬೇಕಾದ ಲಂಚ ಹಾಗೂ ಅದರ ಮೇಲೆ ತನ್ನ ಲಾಭವನ್ನು ಸಂಗ್ರಹಿಸಲೇ ಬೇಕಾಗುತ್ತದೆ. ಈ ಸಂಗ್ರಹಣೆಯ ಒಂದು ಮಾರ್ಗ ಪ್ರಕರಣಗಳನ್ನು `ಇತ್ಯರ್ಥ'ಗೊಳಿಸುವುದು.

ಕರ್ನಾಟಕದ ಎಲ್ಲೆಡೆಯೂ ನಡೆಯುವ ದಂಧೆಯಿದು. ಇದರಲ್ಲಿ ಎಲ್ಲಾ ಶಾಸಕರು ಮತ್ತು ಎಲ್ಲಾ ಪೊಲೀಸ್‌ ಠಾಣೆಗಳಲ್ಲಿರುವ ಅಧಿಕಾರಿಗಳೂ ಇದ್ದಾರೆಂದು ಹೇಳಲು ಸಾಧ್ಯವಿಲ್ಲ. ಆದರೆ `ಆಯಕಟ್ಟಿನ ಸ್ಥಳ'ಗಳಿಗಾಗಿ ಹಪಹಪಿಸುವ ಪೊಲೀಸ್‌ ಅಧಿಕಾರಿಗಳು ಮತ್ತು ಅಂಥ ಸ್ಥಳಗಳನ್ನು ಒದಗಿಸುವ ಶಾಸಕರು ಈ ದಂಧೆಯಲ್ಲಿ ಸಕ್ರಿಯರಾಗಿದ್ದಾರೆ. ಬೆಂಗಳೂರು ನಗರದಲ್ಲಿಯೂ ಭೂಗತ ದೊರೆಗಳಿಗಾಗಿ ಜಮೀನು ವಿವಾದಗಳನ್ನು ಇತ್ಯರ್ಥಗೊಳಿಸುವ ಪೊಲೀಸ್‌ ಅಧಿಕಾರಿಗಳಿದ್ದಾರೆ. ಇವರನ್ನು ಆಯಕಟ್ಟಿನ ಸ್ಥಳಗಳಲ್ಲಿ ಕೂರಿಸಿರುವ ಶಾಸಕರೂ ಇದ್ದಾರೆ. ಇವರಾರೂ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿಲ್ಲ ಎಂಬುದನ್ನು ಹೊರತು ಪಡಿಸಿದರೆ ಇವರಿಗೂ ವೈ ಸಂಪಂಗಿ ಮತ್ತು ಅವರ ಪೊಲೀಸ್‌ ಅನುಯಾಯಿಗಳಿಗೂ ಯಾವ ವ್ಯತ್ಯಾಸವೂ ಇಲ್ಲ.

***

ವೈ ಸಂಪಂಗಿ ಲಂಚ ಸ್ವೀಕರಿಸಿದ್ದು ಕೊಳೆತ ವ್ಯವಸ್ಥೆಯ ಬಹಿರಂಗ ಮುಖ ಮಾತ್ರ. ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಆರಂಭಿಸಿ ಆಡಳಿತ ಪಕ್ಷದ ಪ್ರಮುಖರು ಮತ್ತು ವಿರೋಧ ಪಕ್ಷದ ಪ್ರಮುಖ ನಾಯಕರ ತನಕದ ಎಲ್ಲರ ಪ್ರತಿಕ್ರಿಯೆಯೂ ಶಾಸಕನೊಬ್ಬ ಲಂಚ ಸ್ವೀಕರಿಸಿದ್ದಕ್ಕೆ ಸೀಮಿತವಾಗಿತ್ತು. ಹಾಗೆ ನೋಡಿದರೆ ಸಿದ್ದರಾಮಯ್ಯನವರದ್ದು ಸಿನಿಕ ಪ್ರತಿಕ್ರಿಯೆಯಾಗಿದ್ದರೂ ಇಡೀ ವ್ಯವಸ್ಥೆಯ ಹುಳುಕನ್ನು ಅದು ಪ್ರತಿಬಿಂಬಿಸಿತು.

ಹಿಂದೊಮ್ಮೆ ವಿಧಾನ ಸಭೆಯಲ್ಲಿ ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ `ಇಲ್ಲಿ ಯಾರು ಪ್ರಾಮಾಣಿಕರು?' ಎಂಬರ್ಥದ ಪ್ರಶ್ನೆ ಎತ್ತಿದ್ದಕ್ಕೆ ಸುರೇಶ್‌ ಕುಮಾರ್‌, ಯೋಗೀಶ್‌ ಭಟ್‌ `ನಾವು ಪ್ರಾಮಾಣಿಕರು' ಎಂದು ಧೈರ್ಯವಾಗಿ ಹೇಳಿ,ರಮೇಶ್‌ ಕುಮಾರ್‌ರ ಸಾಮಾನ್ಯೀಕೃತ ಹೇಳಿಕೆ ವಿರೋಧಿಸಿದ್ದರು. ಸಿದ್ದರಾಮಯ್ಯ `ಈತ ದುರದೃಷ್ಟವಶಾತ್‌ ಸಿಕ್ಕಿಬಿದ್ದಿದ್ದಾನೆ' ಎಂದಾಗ ಸುರೇಶ್‌ ಕುಮಾರ್‌ ಮತ್ತು ಯೋಗೀಶ್‌ ಭಟ್‌ ಕೂಡಾ ಈ ಬಾರಿ ಪ್ರತಿಕ್ರಿಯಿಸಲಿಲ್ಲ. ಭ್ರಷ್ಟ ವ್ಯವಸ್ಥೆ ಇವರ ಬಾಯಿಯನ್ನೂ ಮುಚ್ಚಿಸಿಬಿಟ್ಟಿತ್ತೇ? ಅಥವಾ ಸಿಕ್ಕಿಬಿದ್ದವನು ತಮ್ಮ ಪಕ್ಷದ ಶಾಸಕ ಎಂಬ ಕಾರಣಕ್ಕೆ ಸುಮ್ಮನಾಗಿಬಿಟ್ಟರೇ?

ವಿಧಾನ ಪರಿಷತ್ತಿನಲ್ಲಿ ಶಾಸಕ ಸ್ಥಾನದ ಮಹತ್ವವನ್ನೂ ವ್ಯಾಪ್ತಿಯನ್ನೂ ಅರಿತ ಎಂ ಸಿ ನಾಣಯ್ಯನವರಂಥ ಸದಸ್ಯರಿದ್ದಾರೆ. ಅವರೂ ಸಿದ್ದರಾಮಯ್ಯನವರ ಸಿನಿಕ ಹೇಳಿಕೆಗೆ ಪ್ರತಿಕ್ರಿಯಿಸಲಿಲ್ಲ. ಸಿದ್ದರಾಮಯ್ಯನವರ ಹೇಳಿಕೆಗೆ ಯಾವ ವಿರೋಧವೂ ಬಾರದಿರುವುದು ಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಮಂತ್ರಿಗಳು, ಎರಡೂ ಸದನಗಳ ವಿರೋಧ ಪಕ್ಷದ ನಾಯಕರು ಮತ್ತು ಸಭಾಧ್ಯಕ್ಷರು ಸೇರಿದಂತೆ ಎಲ್ಲಾ 300 ಮಂದಿ ಶಾಸಕರೂ ಭ್ರಷ್ಟರೆಂದು ಅವರೇ ಒಪ್ಪಿಕೊಂಡಂತಾಗುವುದಿಲ್ಲವೇ? ಈ ಹೇಳಿಕೆ ಇಡೀ ಶಾಸಕಾಂಗಕ್ಕೆ ಮಾಡುವ ಅವಮಾನ ಎಂದೂ ಯಾರಿಗೂ ಅನ್ನಿಸುತ್ತಿಲ್ಲವೇ?

***

ಬಿಜೆಪಿಗಿದ್ದ ಶಿಸ್ತಿನ ಪಕ್ಷವೆಂಬ ಹೆಗ್ಗಳಿಕೆ ಅದು ಅಧಿಕಾರಕ್ಕೆ ಬರುವ ಮೊದಲೇ ಕಾಣೆಯಾಗಿತ್ತು. ಅದಕ್ಕಿರುವ ಕಾರಣಗಳನ್ನು ಪಟ್ಟಿ ಮಾಡುವುದಕ್ಕೆ ಮತ್ತೊಂದು ದೊಡ್ಡ ಲೇಖನದ ಅಗತ್ಯವಿದೆ. ವೈ ಸಂಪಂಗಿ ಪ್ರಕರಣದಲ್ಲಿ ಬಿಜೆಪಿಯೊಳಗಿನ ಅಶಿಸ್ತು ಮತ್ತೊಮ್ಮೆ ಕಾಣಿಸಿಕೊಂಡಿತು. ಲೋಕಾಯುಕ್ತರು ವೈ ಸಂಪಂಗಿಯನ್ನು ಬಂಧಿಸಿ ಕರೆದೊಯ್ದ ನಂತರ ಬಿಜೆಪಿಯ ಶಾಸಕರ ಗುಂಪೊಂದು ಲೋಕಾಯುಕ್ತರ ಕಚೇರಿಗೆ ನುಗ್ಗಿತು. ಲೋಕಾಯುಕ್ತ ಸಂತೋಷ್‌ ಹೆಗ್ಡೆಯವರು ಹೇಳಿದಂತೆ `ಲೋಕಾಯುಕ್ತ ಕಚೇರಿಗೆ ಕಾಯ್ದೆಯಲ್ಲಿ ಒಂದು ಪೊಲೀಸ್‌ ಠಾಣೆಗೆ ಇರುವ ಸ್ಥಾನವಿದೆ. ಈ ಕಚೇರಿ ಸಂದರ್ಶಿಸುವವರು ಸಂದರ್ಶಕರ ಪುಸ್ತಕದಲ್ಲಿ ತಮ್ಮ ಹೆಸರು, ಸಂದರ್ಶನದ ಕಾರಣಗಳನ್ನು ಬರೆಯಬೇಕು. ಈ ಔಪಚಾರಿಕತೆಯನ್ನು ಪಾಲಿಸಿದವರ ಮೇಲೆ ನಾವು ಅತಿಕ್ರಮ ಪ್ರವೇಶದ ಕೇಸು ದಾಖಲಿಸಬಹುದು'.

ಶಾಸಕರು ಜನಪ್ರತಿನಿಧಿಗಳು ಸದನವನ್ನು ಹೊರತು ಪಡಿಸಿದರೆ ಇವರು ಉಳಿದೆಲ್ಲೆಡೆಯೂ ಸಾಮಾನ್ಯ ನಾಗರಿಕರೇ. ಜನಪ್ರತಿನಿಧಿಗಳಾಗಿರುವುದರಿಂದ ಸಾಮಾನ್ಯ ನಾಗರಿಕರಿಗೆ ಮಾದರಿಯಾಗಿ ನಡೆದುಕೊಳ್ಳುವ ಹೊಣೆ ಹೊತ್ತವರು. ಆದರೆ ಲೋಕಾಯುಕ್ತ ಕಚೇರಿಯಲ್ಲಿ ಇವರು ನಡೆದುಕೊಂಡದ್ದು ಅವರ ಶಾಸಕ ಸ್ಥಾನಕ್ಕೆ ಗೌರವ ತರುವಂಥದ್ದಂತೂ ಆಗಿರಲಿಲ್ಲ. ಜನಪ್ರತಿನಿಧಿ ಎಂದರೆ ಜನರ ಸೇವಕ ಎಂಬುದನ್ನು ಇವರಿಗೆ ನೆನಪಿಸಿಕೊಡುವ ಕೆಲಸವನ್ನು ಅವರ ಪಕ್ಷವಾದರೂ ಮಾಡಬೇಕಾಗಿದೆ.

***

ವೈ ಸಂಪಂಗಿ ಪ್ರಕರಣ ಕೇವಲ ಶಾಸಕನೊಬ್ಬ ಲಂಚ ಪಡೆದ ಪ್ರಕರಣವಷ್ಟೇ ಅಲ್ಲ. ಅಧಿಕಾರರೂಢ ರಾಜಕಾರಣಿಗಳು ಮತ್ತು ಅಧಿಕಾರಿಗಳು ಒಂದಾದರೆ ವ್ಯವಸ್ಥೆ ಎಷ್ಟರ ಮಟ್ಟಿಗೆ ಜನವಿರೋಧಿಯಾಗಬಲ್ಲದು ಎಂಬುದರ ಉದಾಹರಣೆ. ವರ್ಗಾವಣೆ ದಂಧೆಯ ವಿರಾಟ್‌ ರೂಪದ ಅನಾವರಣ. ದುರದೃಷ್ಟವಶಾತ್‌ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುವ ಎಲ್ಲಾ ಚರ್ಚೆಗಳೂ ಈ ಅಂಶ ಮರೆತಂತೆ ಕಾಣಿಸುತ್ತಿವೆ ಅಥವಾ ವೈ ಸಂಪಂಗಿ ಲಂಚ ಪಡೆದದ್ದನ್ನು ಖಂಡಿಸುವುದಕ್ಕೆ ಒತ್ತು ನೀಡುವ ಮೂಲಕ ನಿಜ ಸಂಗತಿ ಮರೆಮಾಚುವ ಪ್ರಯತ್ನವೊಂದು ನಡೆಯುತ್ತಿದೆ.

Re: ಸಂಪಂಗಿ ಪ್ರಕರಣದಾಚೆಗಿನ ಸತ್ಯಗಳು

ಶಾಸಕರನ್ನು ಲೋಕಾಯುಕ್ತ ಪರಿಧಿಯ ಹೊರಗೆ ಇಡಬೇಕೆಂದು ಕೆಲವು ಶಾಸಕರು ಈಗ ಹೇಳುತ್ತಿರುವದನ್ನು ನೋಡಿದರೆ, ಎಷ್ಟು ನಾಚಿಕೆಗೆಟ್ಟಿದ್ದಾರೆ ಎನ್ನುವದು ಅರಿವಾಗುತ್ತದೆ.

Re: ಸಂಪಂಗಿ ಪ್ರಕರಣದಾಚೆಗಿನ ಸತ್ಯಗಳು

S Suresh Kumar avaru Siddaramaiah avara helikeyannu khandisiddaaranthalla...
Shaashakaanga mattu BJP ya maana ulisiddakkaagi Suresh Kumar avarige Yediyurappa promotion kodabeku allave...
300 jana shaashakara paiki obbaraadarigaadaroo aatmashaakshi embudu ideyalla. Kannada maate dhanyalaadalu...
Keep it up Suresh Kumar.
Thanks Ismail for highlighting this...

Re: ಸಂಪಂಗಿ ಪ್ರಕರಣದಾಚೆಗಿನ ಸತ್ಯಗಳು

ಸಾರ್, ಆಗಾಗ ಅಲ್ಲಲ್ಲಿ ಓದಿದ್ದ ಸುದ್ದಿಯ ತುಣುಕುಗಳ ಜೊತೆಗೆ ನಿಮ್ಮ ಲೇಖನ ಓದಿದಾಗ ಒಂದು ದಿಕ್ಕು ದೆಸೆ ಲಭಿಸಿತು. ಒಳ್ಳೆಯ ಲೇಖನ. ನಿಮ್ಮ ಬ್ಲಾಗನ್ನು ಫಾಲೋ ಮಾಡಿದ್ದೇನೆ. ಇದಕ್ಕೆ ನಿಮ್ಮ ಅಭ್ಯಂತರವಿಲ್ಲವೆಂದು ಭಾವಿಸಿರುತ್ತೇನೆ.

ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು

ಪ್ರಿಯ ಸುಧೀಂದ್ರ ನೀವು ಬೊಟ್ಟು ಮಾಡುತ್ತಿರುವ ವಿಷಯ ಬಹಳ ಪ್ರಸ್ತುತವಾಗಿದೆ.

ಹಾಗೆಯೇ ಈ ಹಿಂದೆ ಸುರೇಶ್ ಕುಮಾರ್ ಸದನದಲ್ಲಿಯೇ ಪ್ರತಿಕ್ರಿಯಿಸಿದ್ದರು. ಆದರೆ ಸಿದ್ದರಾಮಯ್ಯನವರ ಹೇಳಿಕೆಗೆ ಅವರು ತಮ್ಮ ಪ್ರತಿಕ್ರಿಯೆಯನ್ನು ಒಂದು ಖಾಸಗಿ ಪತ್ರ ಬರೆಯುವುದಕ್ಕಷ್ಟೇ ಸೀಮಿತವಾಗಿಟ್ಟುಕೊಂಡಿದ್ದರು. ಆದರೆ ಸಿದ್ದರಾಮಯ್ಯನವರ ಮಾತು ಒಂದು ವಿವಾದವಾಗಿ ಬೆಳೆಯುತ್ತಾ ಹೋಗುವುದನ್ನು ಕಂಡ ಅವರು ಪತ್ರವನ್ನು ಪತ್ರಿಕೆಗಳಿಗೂ ಬಿಡುಗಡೆ ಮಾಡಿದರು. ಇದು ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಯಿತು.ನಮ್ಮ ನಡುವಿನ ಕೆಲವೇ ಕೆಲವು ಸಂವೇದನಾಶೀಲ ರಾಜಕಾರಿಣಿಗಳಲ್ಲಿ ಸುರೇಶ್ ಕುಮಾರ್ ಕೂಡಾ ಒಬ್ಬರು.

Re: ಸಂಪಂಗಿ ಪ್ರಕರಣದಾಚೆಗಿನ ಸತ್ಯಗಳು

ಇಸ್ಮಾಯಿಲ್ ಅವರೇ,
ಸುರೇಶ್ ಕುಮಾರ್ ಅವರು ನಮ್ಮ ನಡುವಿನ ಕೆಲವೇ ಕೆಲವು ಸಂವೇದನಾಶೀಲ ರಾಜಕಾರಣಿಗಳಲ್ಲಿ ಒಬ್ಬರು ಎಂಬ ನಿಮ್ಮ ಮಾತು ನಿಜ.
ಆದರೆ ಕಳೆದ ಚುನಾವಣೆಯಲ್ಲಿ ಅವರು ಖರ್ಚು ಮಾಡಿದ ಹಣವೆಷ್ಟು? ಮನೆಯೊಂದಕ್ಕೆ ಇಂತಿಷ್ಟು ಎಂದು ರಾಜಾಜಿನಗರ ಕ್ಷೇತ್ರದಲ್ಲಿ ಅವರ ಬೆಂಬಲಿಗರು ಹಣ ಹಂಚಲಿಲ್ಲವೆ?
ಅವರು ಘೋಷಿಸಿಕೊಂಡ ಆಸ್ತಿಯನ್ನು ಗಮನಿಸಿದರೆ ಅಷ್ಟೊಂದು ಹಣ ಖರ್ಚು ಮಾಡುವುದು ಅವರಿಂದ ಸಾಧ್ಯವಿರಲಿಲ್ಲ. ಇತರ ಬಿಜೆಪಿ ಅಭ್ಯರ್ಥಿಗಳಿಗೆ ಫಂಡಿಂಗ್ ಮಾಡಿದ ಹಾಗೆಯೇ ರೆಡ್ಡಿ ಬ್ರದರ್‍ಸ್ ಇವರಿಗೂ ಸಹ ಹಣ ಒದಗಿಸಿದ್ದರು.
ರೆಡ್ಡಿಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಿದ್ದಲ್ಲಿ ಸುರೇಶ್ ಕುಮಾರ್ ಸಹ ಪರೋಕ್ಷವಾಗಿ ಭ್ರಷ್ಟರಾಗಲಿಲ್ಲವೆ?
ತಾವೇ ಸ್ವತಃ ಕೈಯಿಂದ ಭ್ರಷ್ಟಾಚಾರ ಮಾಡಿದರೆ ಮಾತ್ರ ಅಪರಾಧವೇ? ಬೇರೆಯವರಿಂದ ಮಾಡಿಸಿದರೆ ಕ್ಷಮ್ಯವೇ?
ಸಿದ್ಧರಾಮಯ್ಯ ಹೇಳಿದ್ದು ಸಿನಿಕತನ ಅನಿಸೋದಿಲ್ಲ. ಏಕೆಂದರೆ ಸುರೇಶ್ ಕುಮಾರ್ ಅಂಥವರೂ ಸೇರಿದಂತೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟರಾಗಿದ್ದಾರೆ. ನಾವು ಈಗ ಹುಡುಕಬೇಕಾಗಿರುವುದು ಕಡಿಮೆ ಭ್ರಷ್ಟ ಯಾರು? ಪರೋಕ್ಷ ಭ್ರಷ್ಟ ಯಾರು ಎಂಬುದನ್ನಷ್ಟೆ.

Re: ಸಂಪಂಗಿ ಪ್ರಕರಣದಾಚೆಗಿನ ಸತ್ಯಗಳು

ಪ್ರಿಯ ಅನಾಮಿಕರೇ,

ನಿಮ್ಮ ನಿಲುವನ್ನು ಗೌರವಿಸುತ್ತೇನೆ. ಎಲ್ಲರೂ ಭ್ರಷ್ಟರೇ ಎಂಬ ಹೇಳಿಕೆ ಸಿದ್ಧರಾಮಯ್ಯನವರಂಥ ಶುದ್ಧ ಹಸ್ತದವರೆಂದು ಗುರುತಿಸಲಾಗುವ ರಾಜಕಾರಣಿಗಳಿಂದಲೂ ಬಂದು ಬಿಡುವುದು ಅಪಾಯಕಾರಿ ಎನಿಸುತ್ತದೆ. ಏಕೆಂದರೆ  ಅದು ಭ್ರಷ್ಟಾಚಾರವನ್ನು ಅಳಿದುಳಿದ ಪ್ರಾಮಾಣಿಕರೂ ಒಪ್ಪಿಕೊಳ್ಳುವ ಸ್ಥಿತಿ.

ಇಸ್ಮಾಯಿಲ್

Re: ಸಂಪಂಗಿ ಪ್ರಕರಣದಾಚೆಗಿನ ಸತ್ಯಗಳು

ನಿಮ್ಮದು ಸದಾ ಬಿ.ಜೆ.ಪಿ. ವಿರೋಧಿ ನಿಲುವು, ಒಪ್ಪೋಣ. ಆದರೆ ಸಿದ್ಧರಾಮಯ್ಯನವರದು ಶುದ್ಧ ‘ಹಸ್ತ’ ಎಂದು ಹೇಳುವ ಮೂಲಕ ನಿಮ್ಮಂಥವರೂ ಕಾಂಗ್ರೆಸ್ ಪಕ್ಷದ ಭಟ್ಟಂಗಿಗಳಾಗುವುದು ನಾಚಿಕೆಗೇಡು.

ಇನ್ನೊಮ್ಮೆ ಓದಿ

ಪ್ರಿಯ ಅರವಿಂದರಾಯರೇ,

 ದಯವಿಟ್ಟು ಲೇಖನವನ್ನೂ, ಗೆಳೆಯರೊಬ್ಬರ ಪ್ರತಿಕ್ರಿಯೆಗೆ ನಾನು ನೀಡಿದ ಉತ್ತರವನ್ನೂ ಸರಿಯಾಗಿ ಓದಿ. ಹಾಗೆಯೇ ಈ ಬ್ಲಾಗ್ ನಲ್ಲಿರುವ ಈ ಬರೆಹವನ್ನೂ ಓದಿ. ಸಿದ್ಧರಾಮಯ್ಯನವರ ಕುರಿತ ನನ್ನ ನಿಲುವೇನು ಎಂಬುದು ನಿಮಗೆ ಅರ್ಥವಾಗುತ್ತದೆ.

ಇಸ್ಮಾಯಿಲ್

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.