ಹತ್ತಿರ ಹತ್ತಿರ ಒಂದೂವರೆ ವರ್ಷಗಳ ನಂತರ ಮತ್ತೊಂದು ಬ್ಲಾಗ್ ಪೋಸ್ಟ್ ಬರೆಯುತ್ತಿದ್ದೇನೆ. ಯಾಕೆ ಇಷ್ಟು ಕಾಲ ಬರೆಯಲಿಲ್ಲ ಎಂದು ಯಾರಾದರೂ ಕೇಳಿದರೆ ಹಲವು ಉತ್ತರ ಹೇಳಬಹುದು. ಅವೆಲ್ಲವೂ ನನ್ನ ಸೋಮಾರಿತನಕ್ಕೆ ಮಾಡುವ ಸಮರ್ಥನೆಗಳಾಗಿಬಿಡುತ್ತವಲ್ಲಾ ಎಂಬ ಭಯ ನನ್ನದು. ಹಾಗಾಗಿ ಯಾವ ಕಾರಣಗಳನ್ನೂ ಹೇಳುವುದಿಲ್ಲ. ಇನ್ನು ಮುಂದೆ ನಿಯತವಾಗಿ ಬ್ಲಾಗ್ ಬರೆಯಬೇಕೆಂಬ ತೀರ್ಮಾನವನ್ನಂತೂ ಮಾಡಿದ್ದೇನೆ.
ನನ್ನನ್ನು ಬ್ಲಾಗ್ ಲೋಕಕ್ಕೆ ಎಳೆದು ತಂದದ್ದು ಗೆಳೆಯ ಹರಿಪ್ರಸಾದ್ ನಾಡಿಗ್. ನನ್ನದೇ ಹೆಸರಿನ ಡೊಮೈನ್ ಮಾಡಿಕೊಟ್ಟದ್ದೂ ಅವರೇ. ಆ ಕಾಲದಲ್ಲಿ ನನಗಿದ್ದ ಉತ್ಸಾಹಕ್ಕೆ ಅವರು Durpalನಂಥ ಅನೇಕ ಸಾಧ್ಯತೆಗಳುಳ್ಳ CMS ಒಂದನ್ನೂ ನನಗಾಗಿ ಸ್ಥಾಪಿಸಿ ಕೊಟ್ಟಿದ್ದರು. ಅದನ್ನು ಬಳಸುತ್ತಾ ನಾನು ಬಹಳಷ್ಟನ್ನು ಕಲಿತೆ. ಹರಿ ತಮ್ಮ ವೃತ್ತಿಯಲ್ಲಿ ಹೊಸದಿಂಗತಗಳನ್ನು ಶೋಧಿಸುತ್ತಿದ್ದಾರೆ. ಅವರ ಬಿಡುವಿಲ್ಲದ ಕೆಲಸದ ಮಧ್ಯೆಯೂ ಸಂಪದ, ವಿಕಿಪೀಡಿಯಾಕ್ಕಾಗಿ ಬಹಳಷ್ಟು ಸಮಯವನ್ನೂ ವ್ಯಯಿಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ ನಾನು CMSನ್ನು wordpressಗೆ ಬದಲಾಯಿಸುತ್ತೇನೆ ಎಂದಾಗ ಅದಕ್ಕೂ ಸಹಾಯ ಮಾಡಿದರು. ನನ್ನ ಹಿಂದಿನ ವೆಬ್ ಸೈಟ್‍ನಲ್ಲಿದ್ದ ಎಲ್ಲವೂ ಈಗಿನ ತಾಣದಲ್ಲೂ ಇರಲು ಬೇಕಾದ ಎಲ್ಲವನ್ನೂ ಅವರು ಮಾಡಿದರು. ಅವರಿಗೆ ಕೃತಜ್ಞತೆ ಹೇಳುವುದು ಬಹಳ ಕೃತಕವೆನಿಸುತ್ತದೆ. ಗೆಳೆತನದಲ್ಲಿ ಇಂಥದ್ದಕ್ಕೆಲ್ಲಾ ಅವಕಾಶವಿರಬಾರದು ತಾನೇ.
ತಂತ್ರಜ್ಞಾನದ ಬಗ್ಗೆ ಅಷ್ಟೋ ಇಷ್ಟೋ ಬರೆಯಲು ಕಲಿತಿರುವ ನಾನು ತಂತ್ರಜ್ಞನಲ್ಲ. ವರ್ಡ್ ಪ್ರೆಸ್‌ನಲ್ಲಿ ಈ ತಾಣ ಸಾಕಾರಗೊಳ್ಳುವುದರ ಹಿಂದೆ ಓಂ ಶಿವಪ್ರಕಾಶ್ ಅವರ ಕೆಲವು ರಾತ್ರಿಗಳಿರುವುದೂ ನಿಜವೇ. ನನ್ನ ಅರೆಬರೆ ಜ್ಞಾನದಲ್ಲಿ ಏನನ್ನೂ ಮಾಡಲು ಸಾಧ್ಯವಿರಲಿಲ್ಲ. ಶಿವು ಮಾಡಿದ ಸಹಾಯಕ್ಕೆ ಇಲ್ಲಿ ಕೃತಜ್ಞತೆ ಹೇಳುವುದಕ್ಕೆ ಅರ್ಥವಿಲ್ಲ.
ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಆಂದೋಲನಕ್ಕೆ ತಮ್ಮದೇ ರೀತಿಯಲ್ಲಿ ಕಾಣಿಕೆಗಳನ್ನು ನೀಡುತ್ತಿರುವ ಈ ಇಬ್ಬರು ಕನ್ನಡದ ಪ್ರತಿಭೆಗಳ ಬಗ್ಗೆ ಹೇಳುವುದಕ್ಕಾಗಿ ಇಷ್ಟೆಲ್ಲಾ ಬರೆದೆ. ‘ಸಂಪದ’ವೆಂಬ ವೇದಿಕೆಯಲ್ಲಿ ಹರಿಪ್ರಸಾದ್ ಮಾಡಿದ್ದು ಮತ್ತು ಮಾಡುತ್ತಿರುವುದು, ಅರಿವಿನ ಅಲೆಗಳು, ಲಿನಕ್ಸಾಯಣದಂಥ ಪ್ರಯತ್ನಗಳಲ್ಲಿ ತೊಡಗಿರುವ ಶಿವಪ್ರಕಾಶ್ ಇಡುತ್ತಿರುವ ಹೆಜ್ಜೆಗಳು ಮಾಹಿತಿ ತಂತ್ರಜ್ಞಾನವನ್ನು ಕನ್ನಡದ ಸಂದರ್ಭದಲ್ಲಿ ಪ್ರಸ್ತುತವಾಗಿಸುವ ನಿಟ್ಟಿನಲ್ಲಿ ಬಹುಮುಖ್ಯ ಕೆಲಸಗಳು ಎಂಬುದರಲ್ಲಿ ಸಂಶಯವಿಲ್ಲ.
