ಮಾರಿಯಾ ವರ್ಗಾಸ್ ಲೋಸಾನ ಹೆಸರನ್ನು ಯೋಸಾ ಎಂದು ಬರೆಯಬೇಕಂತೆ. ಇದನ್ನು ಬರೆಯುವ ಹೊತ್ತಿಗೆ ನನಗೆ ಅದು ಅರ್ಧಂಬರ್ಧ ಗೊತ್ತಿತ್ತು. ಯೋಸಾ ಎಂದು ಬರೆಯಲು ಧೈರ್ಯ ಸಾಲದೆ ಲೋಸಾ ಎಂದೇ ಬರೆದೆ. ಇದು ಅವನ ಆತ್ಮಕಥೆಯಾದ ಫಿಶ್ ಇನ್ ದ ವಾಟರ್ ನಿಂದ ಆಯ್ದ ಭಾಗಗಳ ಸಂಗ್ರಹ. ತನ್ನ ಅಪ್ಪನನ್ನು ಭೇಟಿಯಾಗಲು ಹೋಗುವ ಬಾಲ್ಯದ ಘಟನೆಯನ್ನು ವರ್ತಮಾನದೊಳಗೆ ಬೆರೆಸಿ ಒಂದು ದೊಡ್ಡ ಅಧ್ಯಾಯವನ್ನೇ ಯೋಸಾ ಬರೆದಿದ್ದಾನೆ. ಅದರಿಂದ ಕೆಲವು ಭಾಗಗಳನ್ನಷ್ಟೇ ಎತ್ತಿಕೊಂಡು ಇದನ್ನು ರೂಪಿಸಿದೆ. ಯೋಸಾಗೆ ನೊಬೆಲ್ ಪ್ರಶಸ್ತಿ ಬಂದಾಗ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ ಸಂಪಾದಕ ರಘುನಾಥ್ ಚ.ಹ ಕೊಟ್ಟ ಅಸೈನ್‌ಮೆಂಟ್‍ನ ಭಾಗವಾಗಿ ಇದನ್ನು ಬರೆಯಬೇಕಾಯಿತು. ಇದು ಪುರವಣಿಯಲ್ಲಿ ಪ್ರಕಟವೂ ಆಯಿತು.
ಅವು 1946ರ ಕೊನೆಯ ದಿನಗಳು ಹಾಗೆಯೇ 1947ರ ಆರಂಭದ ದಿನಗಳು. ಆದರೆ ಸಲೇಶಿಯನ್ ಶಾಲೆಯ ಪರೀಕ್ಷೆಗಳು ಮುಗಿದಿದ್ದವು. ನನ್ನ ಐದನೇ ಗ್ರೇಡ್ ಮುಗಿಸಿಕೊಂಡಿದ್ದೆ. ಬೆಳ್ಳಗಿನ ಬೆಳಕು ಮತ್ತು ಸುಡುವ ಬಿಸಿಯೊಂದಿಗೆ ಪಿಯೂರಕ್ಕೆ ಬೇಸಿಗೆ ಬಂದಿತ್ತು.
ಅಮ್ಮ ತನ್ನ ನಡುಗದ ಧ್ವನಿಯಲ್ಲಿ ‘ನಿನಗೀಗಾಗಲೇ ಇದು ಗೊತ್ತು… ಅಲ್ವಾ?’ ಎಂದಳು.
‘ಏನು ಗೊತ್ತಿರೋದು?’
‘ನಿಮ್ಮಪ್ಪ ಸತ್ತಿಲ್ಲ ಅನ್ನೋದು ನಿನಗೆ ಗೊತ್ತಲ್ವಾ…?’
‘ಹೌದು… ಹೌದು…’
ಆದರೆ ನನಗದು ಗೊತ್ತಿರಲಿಲ್ಲ. ನನಗೆ ಅಂಥದ್ದೊಂದು ಸಣ್ಣ ಅನುಮಾನವೂ ಇರಲಿಲ್ಲ. ನನ್ನಪ್ಪ ಇನ್ನೂ ಬದುಕಿದ್ದಾನಾ? ಇಷ್ಟು ವರ್ಷ ಅವನು ಸತ್ತಿದ್ದಾನೆ ಅಂತ ನಾನಂದುಕೊಂಡಿದ್ದಾಗ ಅವನೆಲ್ಲಿದ್ದ?
ಅದು ಅಲ್ಲಿಯ ತನಕ ನನಗೆ ಗೊತ್ತಿಲ್ಲದೇ ಇದ್ದ ಕಥೆ. ಇದು ಗೊತ್ತಾದ ದಿನ ಆ ಹೊತ್ತಿನ ತನಕದ ನನ್ನ ಬದುಕಿನಲ್ಲಿ ಬಹುಮುಖ್ಯ ದಿನ. ಬಹುಶಃ ನನ್ನ ಮುಂದಿನ ಬದುಕಿನಲ್ಲೂ ಅದೇ ಮುಖ್ಯ ದಿನ. ಅಪ್ಪ ಬದುಕಿದ್ದಾನೆ ಎಂಬ ಸತ್ಯವನ್ನು ನನ್ನಿಂದ ಮುಚ್ಚಿಡಲಾಗಿತ್ತು. ಅಮ್ಮ, ಅಜ್ಜ, ಅಜ್ಜಿ, ಚಿಕ್ಕಮ್ಮ, ಚಿಕ್ಕಪ್ಪ ಎಲ್ಲರೂ ಇದ್ದ, ನಾನು ಬೆಳೆದ, ನನ್ನದು ಅಂದುಕೊಂಡಿದ್ದ ಆ ದೊಡ್ಡ ಕುಟುಂಬ ನನ್ನಪ್ಪ ಬದುಕಿರುವ ಸತ್ಯವನ್ನು ಬಹಳ ಎಚ್ಚರಿಕೆಯಿಂದ ಮುಚ್ಚಿಟ್ಟಿತ್ತು.ಇದನ್ನೇಕೆ ಅವರು ಮುಚ್ಚಿಟ್ಟಿದ್ದರು ಎಂಬುದನ್ನು ಮತ್ತೆ ತಿಳಿದುಕೊಂಡೆ. ಅಲ್ಲಿಂದ ಇಲ್ಲಿಂದ ತಿಳಿದುಕೊಂಡ ತುಂಡು ತುಂಡು ಘಟನೆಗಳು ಮತ್ತೆ ಕೆಲವು ಕಲ್ಪನೆಗಳ ಮೂಲಕ ಈ ದಿನಗಳನ್ನು ಮತ್ತೆ ಕಟ್ಟಿಕೊಳ್ಳುವ ಪ್ರಯತ್ನವನ್ನೇನೋ ನಾನು ಮಾಡಿದೆ. ಆದರೂ ಇವೆಲ್ಲಾ ಇನ್ನೂ ಒಂದಕ್ಕೊಂದು ಸಂಬಂಧವಿಲ್ಲದ ಘಟನೆಗಳೇ. ಹದಿಹರೆಯವನ್ನು ಆಗಷ್ಟೇ ದಾಟಿದ್ದ ನನ್ನಮ್ಮನ ಬದುಕನ್ನು ಮೂರಾಬಟ್ಟೆಯಾಗಿಸಿದ ಈ ಘಟನಾವಳಿಗಳು ಒಂದು ಅಶ್ಲೀಲ ಧಾರಾವಾಹಿಯ ಕಂತುಗಳಂತಿದ್ದವು.
ಕಥೆ ಆರಂಭವಾಗಿದ್ದು ಹದಿಮೂರು ವರ್ಷಗಳ ಹಿಂದೆ. ನಡೆದದ್ದು ಅಮ್ಮ ನನ್ನ ಜೊತೆ ಮಾತನಾಡುತ್ತಿದ್ದ ಸ್ಥಳದಿಂದ ಎರಡು ಸಾವಿರ ಕಿಲೋಮೀಟರ್‌ಗಳಷ್ಟು ದೂರದಲ್ಲಿ. ಅಮ್ಮನಿಗೆ ಆಗ ಹತ್ತೊಂಬತ್ತು ವರ್ಷ. ಅರಾಕ್ವಿಪಾದಲ್ಲಿದ್ದ ಅಮ್ಮ ಟ್ಯಾಕ್ನಾದಿಂದ ಬಂದ ಅಜ್ಜಿಯ ಜೊತೆ ಅಲ್ಲಿಗೆ ಒಂದು ಮದುವೆಗೆ ಹೋಗಿದ್ದಳು. ಮದುವೆ ಮನೆಯಲ್ಲಿ ಅಮ್ಮನಿಗೆ ಯಾರೋ ಒಬ್ಬರು ಪನಾಗ್ರಾದ ರೇಡಿಯೋ ಟ್ರಾನ್ಸ್‌ಮಿಟರ್ ನಿರ್ವಹಿಸುತ್ತಿದ್ದ ಯುವಕನೊಬ್ಬನನ್ನು ಪರಿಚಯಿಸಿದರು.ಆ ಯುವಕನ ಹೆಸರು ಎರ್ನಸ್ಟೋ ಜೆ.ವೆರ್ಗಾಸ್. ಆತನಾಗ 29 ವರ್ಷದ ಸುಂದರಾಂಗ. ಅಮ್ಮನಂತೂ ಆ ದಿನದಿಂದ ತನ್ನ ಜೀವನದುದ್ದಕ್ಕೂ ಆತನ ಪ್ರಭಾವದಲ್ಲೇ ಇದ್ದಳು. ಅವನದ್ದಂತೂ ಮೊದಲ ನೋಟದ ಪ್ರೇಮವೇ ಆಗಿರಬೇಕು.
ಏಕೆಂದರೆ ಟ್ಯಾಕ್ನಾದಲ್ಲಿ ಕೆಲದಿನಗಳಿದ್ದು ಮತ್ತೆ ಅಮ್ಮ ಅರಾಕ್ವಿಪಾಕ್ಕೆ ಹಿಂದಿರುಗಿದ್ದ ಮೇಲೆ ಆತ ಹಲವಾರು ಪತ್ರಗಳನ್ನು ಬರೆದ. ಪನಾಗ್ರಾದಿಂದ ಈಕ್ವೆಡಾರ್‌ಗೆ ಅವನ ವರ್ಗಾವಣೆಯಾದ ನಂತರ ಅದನ್ನು ಹೇಳುವುದಕ್ಕೆಂದು ಅಮ್ಮನ ಮನೆಯ ತನಕ ಬಂದ. ಹೀಗೊಮ್ಮೆ ಅರಾಕ್ವಿಪಾಕ್ಕೆ ಬಂದಾಗ ಅವರಿಬ್ಬರೂ ಮದುವೆಯಾಗುವ ಔಪಚಾರಿಕ ನಿರ್ಧಾರವೂ ಆಯಿತು. ನಿಶ್ಚಿತಾರ್ಥ ನಡೆದದ್ದು ಮಾತ್ರ ಪತ್ರಗಳ ಮೂಲಕವೇ.ಆಮೇಲೆ ಒಂದು ವರ್ಷ ಕಾಲ ಅವರಿಬ್ಬರ ಪರಸ್ಪರ ಭೇಟಿಯಾಗಲೇ ಇಲ್ಲ. ಅಪ್ಪ ಮತ್ತೆ ಒಂದು ವರ್ಷದ ನಂತರ ಮದುವೆಗೆಂದು ಮತ್ತೆ ಅರಾಕ್ವಿಪಾಕ್ಕೆ ಬಂದ. ಆಗವನಿಗೆ ಈಕ್ವೆಡಾರ್‌ನಿಂದ ಲಿಮಾಕ್ಕೆ ವರ್ಗಾವಣೆಯಾಗಿತ್ತು.
ಅಜ್ಜ ಆಗ ಇದ್ದ ಬುಲೆವಾರ್ ಪಾರಾದ ಮನೆಯಲ್ಲಿ ಮದುವೆ ನಡೆಯಿತು. ಅಮ್ಮ ಬಹಳ ಸುಂದರವಾದ ಬಿಳಿಯ ಉಡುಗೆಯಲ್ಲಿದ್ದಳು. ಅಜ್ಜನ ಮನೆಯಲ್ಲಿ ಬಹುಕಾಲ ಉಳಿದುಕೊಂಡಿದ್ದ ಈ ಫೋಟೋವನ್ನು ನನಗೆ ನೋಡಲು ಕೊಟ್ಟದ್ದೇ ಬಹಳ ವರ್ಷಗಳ ನಂತರ. ಅಮ್ಮನ ಗಾಢ ಕಪ್ಪು ಕಣ್ಣುಗಳಲ್ಲಿದ್ದ ಆ ಕುತೂಹಲದಲ್ಲಿ ನನಗೆ ಭವಿಷ್ಯದ ಕುರಿತ ಅವಳ ಆಶಾವಾದ ಕಾಣಿಸುತ್ತಿತ್ತು. ಆದರೆ ಅವಳಿಗೆ ದೊರೆತದ್ದು ಮಾತ್ರ ದೌರ್ಭಾಗ್ಯ.
ಮದುವೆ ಮುಗಿದ ಮೇಲೆ ನವದಂಪತಿ ಲಿಮಾಕ್ಕೆ ಹೊರಟರು. ಅಲ್ಲೊಂದು ಸಣ್ಣ ಮನೆಯಲ್ಲಿ ಇಬ್ಬರೂ ಹೊಸ ಬದುಕು ಆರಂಭಿಸಿದರು. ಆಗಲೇ ನನ್ನಪ್ಪನ ವಿಚಿತ್ರ ಸ್ವಭಾವದ ಪರಿಚಯ ಅಮ್ಮನಿಗಾದದ್ದು. ಅಮ್ಮ ಜೈಲಿನಲ್ಲಿದ್ದಂತೆ ಬದುಕಿದ್ದಳು. ಅವಳು ಯಾರನ್ನೂ ಭೇಟಿಯಾಗುವಂತಿರಲಿಲ್ಲ. ಸಂಬಂಧಿಕರನ್ನು ಭೇಟಿಯಾಗುವುದಕ್ಕಂತೂ ಸಂಪೂರ್ಣ ನಿಷೇಧ. ಹೊರಗೆ ಹೋಗುವುದಂತೂ ಇಲ್ಲವೇ ಇಲ್ಲ. ಹೋದರೂ ಗಂಡನ ಜೊತೆಗೆ ಸಿನಿಮಾಕ್ಕೆ ಹೋಗಬೇಕು ಇಲ್ಲವೇ ಗಂಡನ ಅಣ್ಣನ ಮನೆಗೊಂದು ಭೇಟಿ ಮಾತ್ರ. ಸಣ್ಣ ಸಣ್ಣ ವಿಷಯವೂ ಅಸೂಯೆಯ ಅಭಿವ್ಯಕ್ತಿಯಾದವು. ಸಹಜವಾಗಿಯೇ ಹಿಂಸೆ ಮಾಮೂಲಾಯಿತು.
ಮದುವೆಯಾದ ಕೆಲವೇ ತಿಂಗಳುಗಳಲ್ಲಿ ನನ್ನನ್ನು ಹೊಟ್ಟೆಯಲ್ಲಿ ಹೊತ್ತಳು. ಮೊದಲ ಕೆಲವು ತಿಂಗಳು ಆಕೆ ಒಬ್ಬಳೇ ಇದ್ದಳು. ಆಗೀಗ ಅವಳ ಓರಗಿತ್ತಿ ಬರುತ್ತಿದ್ದಳು. ಮನೆಯೊಳಗೆ ಹೊಸ ಹೊಸ ಕಾರಣಕ್ಕೆ ಜಗಳಗಳಾಗುತ್ತಲೇ ಇದ್ದವು.ಆದರೆ ಅಪ್ಪನ ಬಗ್ಗೆ ಅಮ್ಮನಿಗಿದ್ದ ಆಕರ್ಷಣೆ ಮತ್ತು ಪ್ರೀತಿಗಳೆರಡಕ್ಕೂ ಕೊರತೆ ಇರಲಿಲ್ಲ. ಅಜ್ಜಿಯ ಮನೆಯಿಂದ ಕರೆ ಬಂತು. ‘ಅವಳು ಹೆರುವುದಕ್ಕೆ ನಮ್ಮಲ್ಲಿಗೇ ಬರಲಿ’. ಈ ಹೊತ್ತಿಗೆ ಅಪ್ಪನ ಕಂಪೆನಿ ಅವನನ್ನು ಹೊಸತೊಂದು ಕಚೇರಿ ಆರಂಭಿಸುವುದಕ್ಕೆ ಲಾ ಪಾಝ್ಾಗೆ ಕಳುಹಿಸಲು ತೀರ್ಮಾನಿಸಿತ್ತು. ಬಹುಶಃ ಅದರ ಪರಿಣಾಮವೋ ಎಂಬಂತೆ ‘ಹೆರಲು ನೀನು ಅಮ್ಮನ ಮನೆಗೆ ಹೋಗು’ ಎಂದು ಅಪ್ಪ ಸಹಜವಾಗಿ ಹೇಳಿಬಿಟ್ಟ. ಅರಾಕ್ವಿಪಾಕ್ಕೆ ಹೋಗಲು ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಅವನೇ ಮಾಡಿದ. ಇದೆಲ್ಲಾ ಎಷ್ಟು ಸಹಜವಾಗಿತ್ತೆಂದರೆ ಅವನ ಮನಸ್ಸಿನಲ್ಲಿ ಮತ್ತೇನೋ ಇತ್ತು ಎಂಬ ಸಣ್ಣ ಅನುಮಾನವೂ ಅಮ್ಮನಿಗೆ ಬರಲಿಲ್ಲ. 1935ರ ನವೆಂಬರ್‌ನ ಮುಂಜಾನೆ ಅಪ್ಪ ತನ್ನ ಐದು ತಿಂಗಳ ಗರ್ಭವತಿ ಹೆಂಡತಿಗೆ ಗಂಡನೊಬ್ಬನ ಪ್ರೀತಿಯಲ್ಲಿ ವಿದಾಯ ಹೇಳಿದ.
ಅಲ್ಲಿಂದಾಚೆಗೆ ಮುಂದಿನ ಹನ್ನೊಂದು ವರ್ಷಗಳ ಕಾಲ ಅವಳಿಗೊಂದು ಪತ್ರವನ್ನೂ ಬರೆಯಲಿಲ್ಲ.ಅವನು ಬದುಕಿದ್ದಾನೆಂಬುದಕ್ಕೆ ಯಾವ ಸೂಚನೆಯೂ ಇರಲಿಲ್ಲ.ಅಂಥದ್ದೊಂದು ಸೂಚನೆ ಸಿಕ್ಕಿದ್ದು ಅಮ್ಮ ಮತ್ತು ನಾನು ಪಿಯೂರದಲ್ಲಿ ಎಗ್ಯೂಗುರೆನ್ ಒಡ್ಡಿನ ಮೇಲೆ ನಡೆಯುತ್ತಿದ್ದಾಗ.ಅಲ್ಲಿಯ ತನಕ ಸತ್ತೇ ಹೋಗಿದ್ದಾನೆ ಎಂದುಕೊಂಡಿದ್ದ ಅಪ್ಪ ಬದುಕಿರುವುದನ್ನು ಅಮ್ಮ ಆ ಕ್ಷಣದಲ್ಲಿ ನನಗೆ ಹೇಳಿದ್ದಳು.ಅಪ್ಪ ಸ್ವರ್ಗದಲ್ಲಿಲ್ಲ. ಅವನು ಈ ಭೂಮಿಯ ಮೇಲೇ ತನ್ನ ಬಾಲ ಅಲ್ಲಾಡಿಸಿಕೊಂಡಿದ್ದಾನೆಂಬುದು ನನಗೂ ಅರಿವಾಗಿತ್ತು.
‘ಅಮ್ಮಾ ನೀನು ಬೂಸಿ ಬಿಡ್ತಿದ್ದೀಯಾ…?’
‘ಇಂಥ ವಿಷಯದ ಬಗ್ಗೆ ನಾನು ಸುಳ್ಳು ಹೇಳಬಹುದು ಅಂತ ಅನ್ಸುತ್ತಾ…?’
‘ಅಪ್ಪ ನಿಜವಾಗ್ಲೂ ಬದುಕಿದ್ದಾರಾ?’
‘ಹೌದು…’
‘ಅಪ್ಪನ್ನ ನೋಡಬಹುದಾ…? ಭೇಟಿಯಾಗಬಹುದಾ…? ಅಪ್ಪ ಎಲ್ಲಿದ್ದಾರೆ..?’
‘ಇಲ್ಲೇ ಪಿಯೂರದಲ್ಲಿ… ಈಗ ನೀನು ಅವರನ್ನ ಭೇಟಿಯಾಗ್ತಿದ್ದೀಯಾ..’
ಕೊನೆಗೂ ಒಂದು ದಿನ ನಾವು ಅದರ ಬಗ್ಗೆ ಮಾತನಾಡಿದೆವು. ಅಪ್ಪ ಸತ್ತು ಬಹಳ ವರ್ಷಗಳಾಗಿತ್ತು.ಆಗಲೂ ಅಮ್ಮನ ಧ್ವನಿ ಕಂಪಿಸುತ್ತಿತ್ತು. ಅವಳ ಕಣ್ಣಿನಲ್ಲಿ ನೀರು ತುಂಬಿತ್ತು. ಆಕೆ ಅರಾಕ್ವಿಪಾದಲ್ಲಿದ್ದ ಆ ದಿನಗಳ ಬಗ್ಗೆ ಹೇಳಿದಳು.ಬೊಲಿವಿಯಾಕ್ಕೆ ಹೋಗಿದ್ದ ಗಂಡನ ಮೌನ ಅವಳನ್ನು ಕಾಡುತ್ತಿತ್ತು. ಫೋನ್ ಇಲ್ಲ, ಕಾಗದವಿಲ್ಲ, ಬೊಲಿವಿಯಾದಲ್ಲಿ ಅವನೆಲ್ಲಿದ್ದಾನೆ ಎಂಬ ಮಾಹಿತಿಯೂ ಇಲ್ಲ. ಅವಳಿಗೆ ನಾನು ಅನಾಥಳಾದೆ ಅನ್ನಿಸತೊಡಗಿತು.
ಅಪ್ಪನ ಕೆಟ್ಟ ಸ್ಥಿತಿಯ ಅರಿವಿದ್ದ ಅವಳಿಗೆ ಅವನನ್ನು ಮತ್ತೆ ನೋಡುತ್ತೇನೆಂಬ ಯಾವ ಆಸೆಯೂ ಉಳಿದಿರಲಿಲ್ಲ.ಆಕೆ ಹೇಳಿದಳು- ‘ಎಲ್ಲದಕ್ಕಿಂತ ಕೆಟ್ಟದ್ದು ಗಾಳಿ ಸುದ್ದಿಗಳು. ಸುಳ್ಳುಗಳು ಮತ್ತು ಸಂಬಂಧಿಕರ ಪಿಸುಮಾತುಗಳು.ನಾನೆಂಥ ಅವಮಾನ ಅನುಭವಿಸಿದೆ ಗೊತ್ತಾ? ನಾನು ಮನೆಯಿಂದ ಹೊರಗೆ ಹೆಜ್ಜೆಯಿಡಲಿಲ್ಲ. ಮನೆಗೆ ಅಪ್ಪನನ್ನು ನೋಡಲು ಯಾರಾದರೂ ಬಂದರೆ ಕೋಣೆಯೊಳಗೆ ಬಾಗಿಲು ಹಾಕಿ ಕುಳಿತುಬಿಡುತ್ತಿದ್ದೆ. ಅವರೇನಾದರೂ ಇವಳ್ಯಾಕೆ ಇಲ್ಲೇ ಇದ್ದಾಳೆ ಎಂದು ಕೇಳಿದರೆ?’. ಅದೃಷ್ಟವಶಾತ್ ನನ್ನಜ್ಜ, ಮಾವಂದಿರು ಎಲ್ಲರೂ ಆಕೆಯನ್ನು ಚೆನ್ನಾಗಿ ನೋಡಿಕೊಂಡರು. ಗಂಡ ಬಿಟ್ಟು ಹೋದರೇನಾಯಿತು, ನಾವೆಲ್ಲಾ ಇದ್ದೇವಲ್ಲಾ ಎಂದು ಧೈರ್ಯ ತುಂಬಿದರು.
ಬುಲೆವರ್ ಪಾರಾದ ಮನೆಯ ಎರಡನೇ ಮಹಡಿಯಲ್ಲಿ ನಾನು ಹುಟ್ಟಿದೆ.ಅದು 1936 ಮಾರ್ಚ್ 28. ಅಮ್ಮ ಬಹಳ ನೋವು ತಿಂದಳಂತೆ. ಅಜ್ಜ ನನ್ನ ಅಪ್ಪನಿಗೊಂದು ಟೆಲಿಗ್ರಾಂ ಕಳುಹಿಸಿದರು.ಅವನು ಆಗಲೂ ಉತ್ತರಿಸಲಿಲ್ಲ.ಅಮ್ಮ ನನಗೆ ಮಾರಿಯೋ ಎಂದು ನಾಮಕರಣ ಮಾಡಿ ‘ಜ್ಞಾನಸ್ನಾನ’ ಮಾಡಿಸಿದ್ದರ ಬಗ್ಗೆ ಬರೆದ ಪತ್ರಕ್ಕೂ ಅಪ್ಪ ಉತ್ತರಿಸಲಿಲ್ಲ.
ಅಜ್ಜನ ಮನೆಯವರಿಗೆ ಅಪ್ಪ ಉತ್ತರಿಸದೇ ಇರುವುದು ಯಾಕೆ ಎಂಬುದೇ ಅರ್ಥವಾಗಿರಲಿಲ್ಲ.ಅಪ್ಪನಿಗೆ ನಮ್ಮ ಪತ್ರಗಳು ಮತ್ತು ಟೆಲಿಗ್ರಾಂಗಳು ತಲುಪದೇ ಇರುವುದೂ ಇದಕ್ಕೊಂದು ಕಾರಣವಾಗಿರಬಹುದೆಂದು ಲಿಮಾದಲ್ಲಿದ್ದ ನಮ್ಮ ಸಂಬಂಧಿಕರೊಬ್ಬರನ್ನು ಸಂಪರ್ಕಿಸಿ ಅಪ್ಪನ ಜೊತೆ ಮಾತನಾಡಲು ಹೇಳಿದರು. ಅವರು ಏರ್‌ಪೋರ್ಟ್‌ಗೆ ಹೋಗಿ ಹಲವು ತಿಂಗಳುಗಳ ನಂತರ ಹಿಂದಿರುಗುತ್ತಿದ್ದ ಅಪ್ಪನ ಜೊತೆ ಮಾತನಾಡಿದರು. ಅವನು ಪ್ರತಿಕ್ರಿಯಿಸಿದ್ದು ವಿಚ್ಛೇದನ ಬೇಡಿಕೆಯ ಮೂಲಕ. ಅಮ್ಮ ಒಪ್ಪಿದಳು. ಇಬ್ಬರು ಮತ್ತೆ ಪರಸ್ಪರರನ್ನು ಕಾಣದೆ ಇಬ್ಬರ ಕಡೆಯ ವಕೀಲರು ವಿಚ್ಛೇದನದ ಪ್ರಕ್ರಿಯೆ ಪೂರ್ಣಗೊಳಿಸಿದರು.
ಅಮ್ಮನ ಎಳೆಯ ವಯಸ್ಸು ಮತ್ತು ಸೌಂದರ್ಯಗಳೆರಡಕ್ಕೆ ಆಕೆ ಮತ್ತೊಂದು ಮದುವೆಯಾಗಬಹುದಿತ್ತು.ಯಾಕೋ ಅವಳು ಆ ನಿರ್ಧಾರ ಮಾಡಲೇ ಇಲ್ಲ.ಕೊಚಬಾಂಬಾಕ್ಕೆ ಬಂದ ಮೇಲೆ ಅವಳು ಗ್ರೇಸ್ ಲೈನ್ ಸಂಸ್ಥೆಯಲ್ಲಿ ಸಹಾಯಕ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದಳು. ಆಕೆಯ ಬದುಕಿನ ತುಂಬಾ ಕೆಲಸ ಮತ್ತು ಮಗ ಆವರಿಸಿಕೊಂಡರು.
ಮತ್ತೊಂದು ಮದುವೆಯ ಬಗ್ಗೆ ಯಾಕೆ ಯೋಚಿಸಲಿಲ್ಲ ಎಂಬುದಕ್ಕೆ ಆಕೆ ಕೊಟ್ಟ ಕಾರಣ- ‘ದೇವರ ಎದುರಿನಲ್ಲಿ ಒಮ್ಮೆ ಮದುವೆಯಾಗಿದ್ದೆನಲ್ಲಾ…’. ಬಹುಶಃ ಇದೇ ನಿಜವಾದ ಕಾರಣವಾಗಿರಬೇಕು. ಕ್ಯಾಥೊಲಿಕರಲ್ಲಿ ಕ್ಯಾಥೊಲಿಕಳಾಗಿದ್ದ ಅಮ್ಮ ಇದಕ್ಕಿಂತ ಹೆಚ್ಚಿನದ್ದನ್ನು ಯೋಚಿಸಲು ಸಾಧ್ಯವಿರಲಿಲ್ಲವೇನೋ? ವಿಚ್ಛೇದನದ ನಂತರ ಮದುವೆಯ ಅಪೇಕ್ಷೆ ಹೊತ್ತು ಅವಳ ಸುತ್ತ ಸುಳಿದಾಡಿದವರಿಗಿಂತ ಹೆಚ್ಚಾಗಿ ತಾನು ವಿಚ್ಛೇದನ ನೀಡಿದ ವ್ಯಕ್ತಿಯ ಮೇಲೆ ಅವಳಿಗೆ ಹೆಚ್ಚು ಪ್ರೀತಿಯಿತ್ತೇನೋ. ಮತ್ತೆ ನಮ್ಮ ಕುಟುಂಬ ಪೆರುವಿಗೆ ಹೋದ ಮೇಲೆ ಮಾಯವಾಗಿದ್ದ ಅರ್ನೆಸ್ಟೋ ಜೆ. ವೆರ್ಗಾಸ್ ಎಂಬ ಅಪ್ಪ ಮತ್ತೆ ನನ್ನ ಮತ್ತು ಅಮ್ಮನ ಬದುಕಿಗೆ ಮತ್ತೊಮ್ಮೆ ಸುಂಟರಗಾಳಿಯಂತೆ ಪ್ರವೇಶ ಪಡೆದ.
‘ಅಪ್ಪ ಇಲ್ಲೇ ಪಿಯೂರಾದಲ್ಲಿದ್ದಾರಾ…’
ಇದೊಂದು ರೀತಿ ಕಥೆಯಂತೆ ಭಾಸವಾಗುತ್ತಿತ್ತು. ಕಥೆಗಳಲ್ಲಿ ಎಲ್ಲವೂ ಬಹಳ ಕುತೂಹಲಕಾರಿಯಾಗಿ ನಿಜವೇ ಎಂಬಂತೆ ನಡೆಯುತ್ತವೆ. ಇದೆಲ್ಲಾ ಅವನ್ನು ಓದುತ್ತಿರುವಷ್ಟು ಹೊತ್ತು ಮಾತ್ರ. ಪುಸ್ತಕ ಮುಚ್ಚಿದ ಕ್ಷಣದಲ್ಲಿ ಕಥೆಯ ಮಾಯಾಜಾಲ ಮುಗಿಯುವಂತೆ ಇದೂ ಮುಗಿದು ಹೋಗುತ್ತದೆಯೇ..?
‘ಹೌದು… ನಿಮ್ಮಪ್ಪ ಇಲ್ಲೇ ಇದ್ದಾರೆ ಹೊಟೇಲ್ ದ ಟೂರಿಸ್ತಾಸ್‌ನಲ್ಲಿ’
‘ನಾನು ಯಾವಾಗ ಅಪ್ಪನನ್ನು ನೋಡಲು ಹೋಗುವುದು..?’
‘ಈಗಲೇ… ಆದರೆ.. ತಾತ-ಅಜ್ಜಿಗೆ ಹೇಳಬೇಡ. ನಿಮ್ಮಪ್ಪ ಇಲ್ಲೇ ಇರುವುದು ಅವರಿಗೆ ಗೊತ್ತಿಲ್ಲ’
ನಾವು ಹೊಟೇಲ್ ಟೂರಿಸ್ತಾಸ್ ಒಳಗೆ ಹೋದೆವು. ಮಾಸಿದ ಉಣ್ಣೆಯ ಸೂಟ್ ಮತ್ತು ಬಿಳಿ ಚುಕ್ಕಿಗಳಿದ್ದ ಟೈ ಧರಿಸಿದ್ದ ಒಬ್ಬ ಮನುಷ್ಯ ನಮ್ಮತ್ತ ಬಂದ. ‘ಇವನು ನಮ್ಮ ಮಗ…’ ಎಂದು ಹೇಳಿದ್ದು ಕೇಳಿಸಿತು. ಆತ ಬಗ್ಗಿ ನನ್ನ ಸುತ್ತ ತೋಳುಗಳನ್ನು ಬಳಸಿ ಮುತ್ತಿಟ್ಟ. ನಾನು ಏನು ಮಾಡಬೇಕೆಂದು ತೋಚದೆ ಗೊಂದಲದಲ್ಲಿದ್ದೆ. ನನ್ನ ಮುಖ ಕೃತಕ ನಗುವಿನಲ್ಲಿ ಮರಗಟ್ಟಿತ್ತು.
ನನ್ನ ಕಲ್ಪನೆಯಲ್ಲಿದ್ದ ಅಪ್ಪ ಮತ್ತು ಎದುರು ಕಾಣಿಸುತ್ತಿದ್ದ ನಿಜ ಅಪ್ಪನ ನಡುವಣ ವ್ಯತ್ಯಾಸ ನನಗೆ ದಿಗಿಲು ಹುಟ್ಟಿಸಿತ್ತು.ಹಣೆಗೆ ಅಂಟಿಕೊಂಡಂತಿದ್ದ ಆ ವಿರಳ ಬೆಳ್ಳಿ ಕೂದಲುಗಳ ಈ ಮನುಷ್ಯನೆಲ್ಲಿ? ನನ್ನ ಕೋಣೆಯ ಟೇಬಲ್ ಮೇಲಿದ್ದ ನಾವಿಕನ ಸಮವಸ್ತ್ರದಲ್ಲಿದ್ದ ಆ ಅಪ್ಪನೆಲ್ಲಿ….? ನನಗಂತೂ ಇದರಲ್ಲೇನೋ ಮೋಸವಿದೆ ಅನ್ನಿಸತೊಡಗಿತು.
ಆ ಅಪ್ಪ ನಾನು ಸತ್ತಿದ್ದಾನೆಂದುಕೊಂಡಿದ್ದ ಅಪ್ಪನಂತಿಲ್ಲ.



ಇಸ್ಮಾಯಿಲ್ ಅವರೇ, ಕವನದಂತಿರುವ ಬರಹ ಓದಿದೆ. ತುಂಬ ಚಂದದ ಅನುವಾದ. ಸತ್ಯ ಹೇಳಬೇಕೆಂದರೆ ಅನುವಾದ ಅಂತ ಗೊತ್ತೇ ಆಗುತ್ತಿಲ್ಲ, ನೀವು ಯೋಸಾನ ಆ ಇಡೀ ಆತ್ಮಕಥೆ ಅನುವಾದಿಸಿದ್ದೀರಾ? ಪುಸ್ತಕವಾಗಿ ಪ್ರಕಟವಾಗಿದೆಯೇ? ಕೊನೆಯಲ್ಲಿ ಆ ಅಪ್ಪ ಸತ್ತ ಅಪ್ಪನಂತಿರಲಿಲ್ಲ – ಅನ್ನುವಲ್ಲಿಗೆ ಅದರ ಮುಂದಿನ ಭಾಗಗಳೇನು? ಎಂಬ ಗಾಢ ಕುತೂಹಲ ಹುಟ್ಟಿಸುತ್ತೆ. ಯೋಸಾನ ಆ ಮೂಲವನ್ನು ಓದುವ ಆಸೆ ಮೂಡಿಸಿದ ಆಪ್ತ ಬರಹಕ್ಕೆ ವಂದನೆಗಳು.
ಇಡೀ ಆತ್ಮಕಥೆಯನ್ನು ಅನುವಾದಿಸಿಲ್ಲ. ಫಿಶ್ ಇನ್ ವಾಟರ್ ಎಂಬ ಪುಸ್ತಕದ ಆಯ್ದ ಭಾಗಗಳನ್ನು ಒಂದು ಕಥೆಯಂತೆ ಜೋಡಿಸಿದ್ದೇನಷ್ಟೇ…